1950-. ಕನ್ನಡದ ಹೊಸ ಅಲೆಯ ಚಿತ್ರ ನಿರ್ದೇಶಕ. ಶಿವಮೊಗ್ಗ ಜಿಲ್ಲೆ ಕಾಸರವಳ್ಳಿಯಲ್ಲಿ 1950ರ ಡಿಸೆಂಬರ್ 3ರಂದು ಜನಿಸಿದರು. ತಂದೆ ಗಣೇಶರಾವ್ ಕಾಸರವಳ್ಳಿಯಲ್ಲಿ ಕೃಷಿಕರು, ಗಾಂಧಿವಾದಿಯೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ತಾಯಿ, ಲಕ್ಷ್ಮೀದೇವಿ ಈಕೆಯ ತಂದೆ ಪಂಡಿತ ನರಸಿಂಹಶಾಸ್ತ್ರಿ ಪ್ರಸಿದ್ಧ ಸಂಸ್ಕೃತ ಪಂಡಿತರು ಮತ್ತು ಶಿಕ್ಷಕರೂ ಆಗಿದ್ದರು. ಗಿರೀಶ್ ಕಾಸರವಳ್ಳಿ ಯವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಶಿವಮೊಗ್ಗ ಸಮೀಪದ ಕಮ್ಮರಡಿಯ ಶಾಲೆಯಲ್ಲಿ ಪಡೆದರು. ಮಣಿಪಾಲದಲ್ಲಿ ಬಿ.ಫಾರ್ಮ ಅಧ್ಯಯನ ಮಾಡಿದರು. ಅನಂತರ ಚಿಕ್ಕಪ್ಪ ಕೆ.ವಿ.ಸುಬ್ಬಣ್ಣನವರಿಂದ ಸ್ಫೂರ್ತಿ ಪಡೆದು ಅನಂತರ ಚಲನಚಿತ್ರ ನಿರ್ದೇಶನದ ಬಗೆಗೆ ಆಸಕ್ತಿ ಹೊಂದಿ ಪುಣೆಯ ಚಲನ ಚಿತ್ರ ಸಂಸ್ಥೆಯಲ್ಲಿ ನಿರ್ದೇಶನದ ಡಿಪ್ಲೊಮಾ ತರಗತಿಗೆ ಸೇರಿದರು. ತರಬೇತಿಯ ಅವಧಿ ಯಲ್ಲಿ ‘ಅವಶೇಷ’ ಕಿರುಚಿತ್ರ ನಿರ್ದೇಶಿಸಿದರು. ಈ ಚಿತ್ರ ಅತ್ಯತ್ತಮ ಪ್ರಯೋಗಾತ್ಮಕ ಚಿತ್ರವೆಂದು ಪ್ರಶಸ್ತಿ ಗಳಿಸಿತು (1975). ಬೆಂಗಳೂರಿನ ಆದರ್ಶ ಚಲನಚಿತ್ರ ಸಂಸ್ಥೆಯ ಪ್ರಾಂಶುಪಾಲರಾಗಿಯೂ ಸ್ವಲ್ಪಕಾಲ ಇವರು ಸೇವೆಸಲ್ಲಿಸಿದರು. ಅನಂತರ ಇವರು ಬಿ.ವಿ.ಕಾರಂತರೊಂದಿಗೆ ಚೋಮನ ದುಡಿ, ಸಿ.ಆರ್.ಸಿಂಹರೊಂದಿಗೆ ಕಾಕನಕೋಟೆ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಗಳಿಸಿದರು. 

ಯು.ಆರ್.ಅನಂತಮೂರ್ತಿಯವರ ಕಥೆ ಆಧಾರಿತ ಘಟಶ್ರಾದ್ಧ ಇವರು ಸ್ವತಂತ್ರವಾಗಿ ನಿರ್ದೇಶಿಸಿದ ಮೊದಲ ಚಿತ್ರ (1977). ಈ ಚಿತ್ರ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಗಳಿಸಿತು. ಅನಂತರ ಇವರು ನಿರ್ದೇಶಿಸಿದ ಹಲವು ಚಿತ್ರಗಳು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದವು. ಆಕ್ರಮಣ (1980), ಮೂರು ದಾರಿಗಳು (1981), ತಬರನ ಕಥೆ (1987), ಬಣ್ಣದವೇಷ (1988), ಮನೆ (1990), ಕ್ರೌರ್ಯ, ತಾಯಿಸಾಹೇಬ (1996), ದ್ವೀಪ (2002, ಹಸೀನಾ (2005) - ಇವು ಇವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು.

ತಬರನ ಕಥೆ (ಪೂರ್ಣಚಂದ್ರತೇಜಸ್ವಿ), ಬಣ್ಣದವೇಷ   (ಸುಂದರ ನಾಡಕರ್ಣಿ), ತಾಯಿಸಾಹೇಬ (ರಂ.ಶಾ.) ಹಾಗೂ ದ್ವೀಪ (ನಾ.ಡಿಸೋಜ) ಚಿತ್ರಗಳೂ ಇವರಿಗೆ ಸ್ವರ್ಣಕಮಲ ಪ್ರಶಸ್ತಿ ತಂದುಕೊಟ್ಟಿವೆ. ಇವರು ನಿರ್ದೇಶಿಸಿದ ಹಸೀನಾ ಚಿತ್ರಕ್ಕೆ (ಕಥೆ: ಭಾನುಮುಷ್ತಾಕ್) ಅತ್ಯುತ್ತಮ ಸಾಮಾಜಿಕ ಸಂದೇಶವುಳ್ಳ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಬಂದಿದೆ (2005). ಸಮಾಜ ಅರ್ಥವಂತಿಕೆಯ ಚಿತ್ರ ನಿರ್ಮಾಣದೊಂದಿಗೆ ಗಿರೀಶ್ ಕಾಸರವಳ್ಳಿ ಸೃಜನಶೀಲ ನಿರ್ದೇಶಕರಾಗಿ ಉಳಿದಿದ್ದಾರೆ. ಇವರು ಕಿರುತರೆಯಲ್ಲೂ ಯಶಸ್ವಿಯಾಗಿರುವ ನಿರ್ದೇಶಕ, ಇವರ ಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಗಮನಾರ್ಹ ಸ್ಥಾನ ಸಂಪಾದಿಸಿಕೊಂಡಿವೆ. ಕಾಸರವಳ್ಳಿಯವರ ಇತ್ತೀಚಿನ ನಿರ್ದೇಶನದ ಚಿತ್ರ ಕೂರ್ಮಾವತಾರಕ್ಕೆ(2012) ರಾಷ್ಟ್ರಪ್ರಶಸ್ತಿ ದೊರೆರೆತಿದೆ. ಇವರ ಪತ್ನಿ ವೈಶಾಲಿ. ಅವರು ಕೂಡ ರಂಗಭೂಮಿ ನಟಿ. ಚಲನಚಿತ್ರಗಳಲ್ಲಿ ಅಭಿನಯಿಸುವುದರೊಂದಿಗೆ ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದರು. ವೈಶಾಲಿಯವರು 2011ರಲ್ಲಿ ನಿಧನವಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ